Nammuru..... Nammajana

ನಮ್ಮೂರು..... ನಮ್ಮ ಜನ....

tiptur stories

 ನಮ್ಮೂರಲ್ಲೂಬ್ಬ ಸಾಲು ಮರದ ಬೀರಜ್ಜ...  

ಬೀರಜ್ಜನ ಬಗ್ಗೆ ಒಂದಿಷ್ಟು...

ಉತ್ಸಾಹ ಕುಂದದ ೭೫ರ ಇಳಿವಯಸ್ಸಿನ ಗ್ಯಾರಘಟ್ಟದ ಸಾಲು ಮರದ ಬೀರಜ್ಜ ಮತ್ತೊಮ್ಮೆ ಭೂಮಿಗೆ ಬೀಜ ಬಿತ್ತುವ ಮೂಲಕ ತನ್ನ ವೃಕ್ಷಪ್ರೇಮ ಸಾಬೀತು ಪಡಿಸಿದ್ದಾರೆ.
ವಿಶ್ವ ಪರಿಸರ ದಿನದಂದು ಬೀರಜ್ಜ ಗ್ಯಾರಘಟ್ಟದಿಂದ ಅರಸೀಕೆರೆ ಮಾರ್ಗದ ರಸ್ತೆಯುದ್ದಕ್ಕೂ ಮರವೆಲ್ಲಾ ಹೂವು ಬಿಡುವ ಟೆಕೋಮಾ, ಗೋಲ್ಡ್‌ಮಾರ್, ಪೆಲ್ಟಾ ಫಾರಂ ಸೇರಿದಂತೆ ನಾನಾ ಜಾತಿಯ ಮರಗಳ ಬೀಜಗಳನ್ನು ನೆಟ್ಟಿದ್ದಾರೆ. ಗ್ಯಾರಘಟ್ಟದ ಇದೇ ರಸ್ತೆಯಲ್ಲಿ ಕಳೆದ ೪೦-೫೦ ವರ್ಷಗಳ ಹಿಂದೆ ಸುಮಾರು ೨೦೦ಕ್ಕೂ ಹೆಚ್ಚು ಆಲದ ಮರಗಳನ್ನು ನೆಟ್ಟು ಪರಿಸರ ಕಾಳಜಿ ತೋರಿದ್ದ ಬೀರಜ್ಜನ ಶ್ರಮದಿಂದ ಸುಮಾರು ೩ ಕಿಮಿ ಉದ್ದಕ್ಕೂ ಎರಡು ಕಡೆಗಳಲ್ಲಿ ಇಂದಿಗೂ ೧೦೦ಕ್ಕೂ ಹೆಚ್ಚು ಮರಗಳು ಹುಲುಸಾಗಿ ಬೆಳೆದು ಬೀರಜ್ಜನ ವೃಕ್ಷಪ್ರೇಮದ ಕಥೆಯನ್ನು ಸಾರುತ್ತಿವೆ.
೧೯೪೫-೪೬ರ ಅವಧಿಯಲ್ಲಿ ೬ನೇ ತರಗತಿಯಲ್ಲಿ ಓದುತಿದ್ದ ಬೀರಜ್ಜ ಓದನ್ನು ಮುಂದುವರೆಸಲಾಗದೇ ವ್ಯವಸಾಯದ ಕಡೆ ನಿಂತಿದ್ದರಂತೆ. ಮುಂದೆ ಕೆಲವೇ ವರ್ಷಗಳಲ್ಲಿ ಮದುವೆಯೂ ಮಾಡಲಾಗಿತ್ತಂತೆ. ಆದರೆ ತಾವು ಓದುವಾಗ ಶಾಲೆಯಲ್ಲಿದ್ದ ಕಾಕ ಮಾಸ್ತರರ ಮಾತುಗಳು ಬೀರಜ್ಜನ ಮನದಲ್ಲಿ ಆಗಾಗ ಪ್ರತಿಧ್ವನಿಸುತ್ತಿದ್ದವಂತೆ. ಮನುಷ್ಯನ ಆಯಸ್ಸು ಕೇವಲ ನೂರು ವರ್ಷ, ಅದೇ ಆಲದ ಮರದ ಆಯಸ್ಸು ಮುನ್ನೂರು ವರ್ಷ. ಮನುಷ್ಯ ಬದುಕಿದ್ದರೆ ಯಾರಿಗೂ ಒಳಿತು ಮಾಡಲಾರ ಆದರೆ ಮರಗಳು ತಮ್ಮ ಜೀವನ ಪೂರ್ತಿ ಮೌನವಾಗಿದ್ದುಕೊಂಡೇ ಜನ, ಜಾನೂವಾರು ಹಾಗೂ ಪಕ್ಷಿಗಳಿಗೆ ಆಶ್ರಯ ನೀಡುವುದಲ್ಲದೇ ಮಳೆಗೆ ಕಾರಣವಾಗುತ್ತವೆ. ಶಿಷ್ಯರು ಒಂದೊಂದು ಮರಗಳನ್ನು ನೆಟ್ಟು ಗುರು ಕಾಣಿಕೆ ನೀಡಿರಿ ಎಂದಿದ್ದರಂತೆ.
ಆಗಾಗಿ ಬೀರಜ್ಜ ತನ್ನ ಕಾಕಾ ಮಾಸ್ತರರ ಗಂಟು ಬಿದ್ದು ಅವರ ಹಳೇಬೀಡು ಊರಿನಿಂದ ಒಂದು ಆಲದ ಮರದ ಕೊಂಬೆ ತರಿಸಿಕೊಂಡು ಗ್ರಾಮದ ಮುಂದೆ ನೆಟ್ಟರಂತೆ. ಅದು ೪-೫ ವರ್ಷದಲ್ಲಿ ದೊಡ್ಡದಾಗಿ ಬೆಳೆದಂತೆಲ್ಲಾ ಅದರ ಕೊಂಬೆಗಳನ್ನು  ಕಡಿದು ರಸ್ತೆ ಉದ್ದಕ್ಕೂ ನೆಡುತ್ತಾ ಬಂದರಂತೆ. ಹೀಗೆ ನೂರಾರು ಕೊಂಬೆಗಳನ್ನು ನೆಟ್ಟು ಪೋಷಿಸಿ, ರಕ್ಷಿಸಿದ್ದಾರೆ. ಬೇಸಿಗೆ ಕಾಲದಲ್ಲಿ ತನ್ನ ಪತ್ನಿಯೊಂದಿಗೆ ಸೇರಿಕೊಂಡು ಅಡ್ಡೆಯಲ್ಲಿ ನೀರನ್ನು ಹೊತ್ತು ಹಾಕಿದ್ದಾರೆ. ಅವರ ನಿಸ್ವಾರ್ಥ ಶ್ರಮದ ಫಲವಾಗಿ ಇಂದು ನೂರಕ್ಕೂ ಹೆಚ್ಚು ಮರಗಳು ಸಾಲು ಸಾಲಾಗಿ ನಿಂತು ನಿತ್ಯಾ ಬೀರಜ್ಜನಿಗೆ ನಮನ ಸಲ್ಲಿಸುತ್ತವೆ.
ತನ್ನ ಹೊಲಕ್ಕೆ ಹೋಗುವಾಗ ಬೀರಜ್ಜ ತಾನು ನೆಟ್ಟಿರುವ ಮರಗಳ ಮಧ್ಯೆ ಹಾದು ಹೋಗುತ್ತಾರಂತೆ. ಆಗ ಮರಗಳು ಗಾಳಿಗೆ ಸುಯ್ಯೂ ಎನ್ನುವಾಗ ಬೀರಜ್ಜನಿಗೆ ಏನೋ ಆನಂದ ಮತ್ತು ತೃಪ್ತಿ ಉಂಟಾಗುತ್ತದೆಯಂತೆ. ಬಿಸಿಲಲ್ಲಿ, ಮಳೆಯಲ್ಲಿ ಜನ ಜಾನೂವಾರುಗಳು ಮರದ ಆಶ್ರಯ ಪಡೆದು ನಿಂತಿದ್ದಾಗ ಬೀರಜ್ಜ ಸಂತೋಷ ಪಡುತ್ತಾರಂತೆ. ತಾನು ನೆಟ್ಟ ಮರಗಳು ಇಂದು ಬೃಹತ್ತಾಗಿ ಬೆಳೆದಿದ್ದು ತಾನು ಇಲ್ಲದಿದ್ದರೂ ತನ್ನ ಹೆಸರನ್ನೂ ಮುಂದೆ ನೂರಾರು ವರ್ಷಗಳ ಕಾಲ ಈ ಮರಗಳು ಜಗತ್ತಿಗೆ ಸಾರುತ್ತಲೇ ಇರುತ್ತವೆ. ಮನುಷ್ಯನಿಗೆ ಮಾಡಿದ ಉಪಕಾರ ಕ್ಷಣಾರ್ಧದಲ್ಲಿ ಮರೆಯುತ್ತಾನೆ ಆದರೆ ಮರಗಳಿಗೆ ಮಾಡಿದ ಉಪಕಾರ ನೂರಾರು ವರ್ಷ ನೆನಪಿನಲ್ಲಿರುತ್ತದೆ. ಅಷ್ಟೇ ಸಾಕು, ನನ್ನ ಬದುಕು ಸಾರ್ಥಕ ಎನ್ನುವ ಬೀರಜ್ಜನಿಗೆ ಮನದಲ್ಲಿ ಏನೋ ಅಸಮಾಧಾನವಿದೆ. ಇಷ್ಟು ಚೆನ್ನಾಗಿ ಬೆಳೆಯುತ್ತವೆ ಎಂದಿದ್ದರೆ ಮರಗಳನ್ನು ನೆಡುವುದು ನಿಲ್ಲಿಸದೇ ಮುಂದುವರೆದಿದ್ದರೆ ಇಂದಿಗೆ ಲಕ್ಷಾಂತರ ಮರಗಳನ್ನು ನೆಡಬಹುದಿತ್ತು ಎಂದು ಬೇಸರ ಪಟ್ಟುಕೊಳ್ಳುವ ಬೀರಜ್ಜ ನಾನು ಸಾಯುವವರೆಗೂ ಮತ್ತಷ್ಟು ಸಸಿಗಳನ್ನು ನೆಡುತ್ತೇನೆ ಎಂದು ಅದೇ ಉತ್ಸಾಹದಿಂದ ಹೇಳುತ್ತಾರೆ.
ಎಲ್ಲೆಲ್ಲಿ ಖಾಲಿ ಜಾಗ ಇದಯೋ ಅಲ್ಲಿ, ಮರಗಳಿಲ್ಲದ ರಸ್ತೆಗಳ ಎರಡೂ ಕಡೆಗಳಲ್ಲಿ ಉದ್ದಕ್ಕೂ ಸಸಿಗಳನ್ನು ನೆಡುವ ಆಸೆಯಿದೆ ಆದರೆ ಇವತ್ತೀಗೂ ಯಾರೂ ಆ ತರಹದ ಸಹಾಯವಾಗಲಿ ಅಥವಾ ಪ್ರೋತ್ಸಾಹವಾಗಲಿ ಮಾಡಲಿಲ್ಲ. ಆರ್ಥಿಕ ಸಂಕಟದಲ್ಲಿರುವ ತನಗೆ ತನ್ನ ಕನಸನ್ನು ನನಸು ಮಾಡಕೊಳ್ಳುವ ಸಾಮಾರ್ಥ್ಯವನ್ನು ಕುಗ್ಗಿಸಿದೆ ಎನ್ನುತ್ತಾರೆ. ಸರಕಾರವೂ ಸಹ ವಿಶ್ವ ಪರಸರ ದಿನಾಚರಣೆ ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ, ಏನು ಸಾರ್ಥಕತೆ ಎನ್ನುವ ಬೀರಜ್ಜ ಈಗಲೂ ಹೊಲದ ಎಲ್ಲಾ ಕೆಲಸಗಳನ್ನು ಹುಡುಗರಂತೆ ಮಾಡುತ್ತಾರೆ. ಆರೋಗ್ಯವಾಗಿರುವ ಬೀರಜ್ಜ ತನ್ನ ಮನದ ಆಸೆಯನ್ನು ತಾನೇ ಈಡೇರಿಸಿಕೊಳ್ಳಲು ನಗರದಿಂದ ಬೀಜಗಳನ್ನು ತಂದು ಮಳೆ ಬಿದ್ದಾಗ ರಸ್ತೆ ಪಕ್ಕಗಳಲ್ಲಿ ಗುಂಡಿ ತೋಡಿ ನೆಡುತ್ತಿದ್ದಾರೆ. ಪರಿಸರ ಪ್ರೇಮಿಯಾದ ಬೀರಜ್ಜ ತನ್ನ ಸಾಧನೆಯ ಮೂಲಕ ಯುವ ಸಮಾಜಕ್ಕೆ ಪರಿಸರ ಸಂರಕ್ಷಣೆಯ ಸಂದೇಶ ನೀಡಿದ್ದಾರೆ. ವಿಶ್ವ ಪರಿಸರ ಮಾಸಾಚರಣೆ ಸಂದರ್ಭದಲ್ಲಿ ಪತ್ರಿಕೆ ಬೀರಜ್ಜನ ಶ್ರಮ ಮತ್ತು ಸಾಧನೆಯನ್ನು ನೆನಪಿಸುತ್ತದೆ.


ಸಸಿನೆಡುವ ಕಾರ್ಯಕ್ರಮ:ಬೀರಜ್ಜನಿಂದ ಚಾಲನೆ
 9_tiptur_1ನಗರದ ಸಿದ್ಧರಾಮೇಶ್ವರ ಬಡಾವಣೆಯ ರಸ್ತೆಗಳ ಬದಿಯಲ್ಲಿ ಇಕೋಕ್ಲಬ್ ಮಿತ್ರರು ಹಮ್ಮಿಕೊಂಡಿದ್ದ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ವೃಕ್ಷಪ್ರೇಮಿ ಗ್ಯಾರಘಟ್ಟದ ಬೀರಜ್ಜ ಭಾಗವಹಿಸಿದ್ದರು.ಇಕೋಕ್ಲಬ್ ಸದಸ್ಯರು ಬಡಾವಣೆಯ ನಿವಾಸಿಗಳ ಸಹಕಾರದೊಂದಿಗೆ ಸಸಿಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು. ಸಾಲುಮರದ ಗ್ಯಾರಘಟ್ಟದ ಬೀರಜ್ಜರವರನ್ನು ಪುರಸ್ಕರಿಸಿದ್ದಲ್ಲದೇ ನೇರಳೆ, ಬಾದಾಮಿ, ಹೊಂಗೆ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಟ್ಟ ಸದಸ್ಯರು ಸಸಿಗಳ ಪೋಷಣೆ ಹೊಣೆಯನ್ನು ಬಡಾವಣೆಯ ನಿವಾಸಿಗಳಿಗೆ ವಹಿಸಿದರು. ಇಕೋಕ್ಲಬ್‌ನ ಗುರುರಾಜ್, ಪರಿಸರ ಪ್ರೇಮಿ ಷಡಕ್ಷರಿದೇವರು, ನಗರಸಭಾ ಸದಸ್ಯರಾದ ನಿಜಗುಣ, ಭೈಫ್‌ನ ಪೂರ್ಣಿಮ, ದಯಾನಂದ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 ಚಿತ್ರದಲ್ಲಿ: ತಿಪಟೂರು ನಗರದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಸಸಿಗಳನ್ನು ನಡುವ ಮೂಲಕ ಇಕೋ ಕ್ಲಬ್ ಸದಸ್ಯರು ಪರಿಸರ ದಿನಾಚರಣೆಯನ್ನು ಆಚರಿಸಿದರು.

Blog Archive