Nammuru..... Nammajana

ನಮ್ಮೂರು..... ನಮ್ಮ ಜನ....

Thursday, October 7, 2010

ಹಾಸ್ಯ ಸಾಮ್ರಾಟ ನರಸಿಂಹರಾಜು

Narashimaraju
ಅಭಿನಯ ಹಾಸ್ಯದ ಮೂಲಕವೇ ಕನ್ನಡಚಿತ್ರ ರಸಿಕರನ್ನು ನಕ್ಕುನಗಿಸಿದ ಧೀಮಂತ ನಟ ನರಸಿಂಹರಾಜು. ಕನ್ನಡಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನರಸಿಂಹರಾಜು ಅವರು ಪ್ರಮುಖರು. 1926ರಿಂದ 1979ರವರೆಗೆ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನರಸಿಂಹರಾಜು ಹಾಸ್ಯನಟರಾಗಿ ಎಷ್ಟರ ಮಟ್ಟಿಗೆ ಬೆಳೆದರೆಂದರೆ, ರಾಜ್ ಕುಮಾರ್ ನಾಯಕ ನಟರಾದರೆ, ಅವರ ಗೆಳೆಯನ ಪಾತ್ರಕ್ಕೆ ನರಸಿಂಹರಾಜು ಆಯ್ಕೆಯಾಗುತ್ತಿದ್ದರು. ನಾಯಕನ ಗೆಳೆಯ, ಸಹೋದ್ಯೋಗಿ, ಸಹಾಯಕ ಹೀಗೆ ಯಾವುದಾದರೂ ಒಂದು ಪಾತ್ರ ಸೃಷ್ಟಿಸಿ ನರಸಿಂಹ ರಾಜು ಅವರಿಗೆ ಅವಕಾಶ ನೀಡಲಾಗುತ್ತಿತ್ತು.ನರಸಿಂಹರಾಜು ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ತಿಪಟೂರಿನಲ್ಲಿ. ಚಿಕ್ಕಪ್ಪನ ಪ್ರೋತ್ಸಾಹದಿಂದ ಚಿಕ್ಕಂದಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಬಾಲನಟನಾಗಿ ಖ್ಯಾತಿ ಪಡೆದರು. 1954ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನರಸಿಂಹ ರಾಜು ನಟಿಸಿದ ಮೊದಲ ಚಿತ್ರ ಬೇಡರಕಣ್ಣಪ್ಪ. ರಾಜ್ ಕುಮಾರ್ ನಾಯಕ ನಟರಾದ ಮೊದಲ ಚಿತ್ರವೂ ಆದ ಬೇಡರ ಕಣ್ಣಪ್ಪದಲ್ಲಿ ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹ ರಾಜು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಮಕ್ಕಳರಾಜ್ಯ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿ ಮಿಂಚಿದ ಅವರು, ಸತ್ಯಹರಿಶ್ಚಂದ್ರ ಚಿತ್ರದಲ್ಲಿ ನಕ್ಷತ್ರಿಕರಾಗಿ ಮಾಡಿದ ಪಾತ್ರ ಮರೆಯುವಂತೆಯೇ ಇಲ್ಲ. ನಂತರ ನೂರಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ವಿಜೃಂಭಿಸಿದರು. ಪ್ರೊಫೆಸರ್ ಹುಚ್ಚೂರಾಯ ಚಿತ್ರದ ಮೂಲಕ ನಾಯಕ ನಟರಾಗಿಯೂ ಅಭಿನಯಿಸಿದರು. ಹಲವು ಚಿತ್ರಗಳಲ್ಲಿ ದ್ವಿಪಾತ್ರ, ತ್ರಿಪಾತ್ರಗಳಲ್ಲೂ ಮನಸೂರೆಗೊಂಡರು.ಭಕ್ತ ಮಲ್ಲಿಕಾರ್ಜುನ, ಭಕ್ತ ಮಾರ್ಕಂಡೇಯ, ಅಣ್ಣ ತಂಗಿ, ರಣಧೀರ ಕಂಠೀರವ, ದಶಾವತಾರ, ಜೇನುಗೂಡು, ಅಮರಶಿಲ್ಪಿ ಜಕಣಾಚಾರಿ ಮೊದಲಾದ ಚಿತ್ರಗಳಲ್ಲಿ ತಮ್ಮ ಅಪ್ರತಿಮ ನಟನಾ ಕೌಶಲ್ಯ, ಮುಖಭಂಗಿ, ಸಂಭಾಷಣೆ, ಮಾತಿನಧಾಟಿಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ನರಸಿಂಹರಾಜು ಇಂದು ನಮ್ಮೊಂದಿಗಿಲ್ಲ ಆದರೆ ಅವರ ನೆನಪು ಸದಾ ಹಸಿರು.

Wednesday, October 6, 2010

ಮೂಡಲಪಾಯ ಯಕ್ಷಗಾನ

ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ
ಕರ್ನಾಟಕ.


ಕರ್ನಾಟಕದ ಜನಪದ ಕಲೆಗಳಲ್ಲಿ ಅತ್ಯಂತ ವರ್ಣಮಯವೂ, ವೈಭಪೋಪೇತವೂ ಆದದ್ದು ಯಕ್ಷಗಾನ. ಅದರ ವಿವಿಧ ಪ್ರಕಾರಗಳಲ್ಲಿ ಯಾವುದೋ ಒಂದೆರಡು ತಾವೇ ಪ್ರದರ್ಶನದ ಅನುಸ್ಯೂತತೆ ಮತ್ತು ಜನಪದ ಪ್ರೋತ್ಸಹದಿಂದ ಒಂದು ವಿಶಿಷ್ಟ ರಂಗಭೂಮಿಯಾಗಿಬಿಟ್ಟು ಇಂದು ದೇಶ ವಿದೇಶಗಳ ಹೃನ್ಮನಗಳನ್ನು ಸೆಳೆದಿರುವುದು ವಾಸ್ತಾವವಷ್ಟೆ. ಇದರಲ್ಲಿ ಮೂಲಸಂಪ್ರದಾಯದ ವೇಷಗಾರಿಕೆ ಮತ್ತು ಸಂಗೀತದ ಚೌಕಟ್ಟು ಮುಖ್ಯವಾದ ಆಕರ್ಷಣೆ ಎನಿಸಿದೆ. ಪ್ರತಿ ಪ್ರಕಾರದಲ್ಲೂ ಇರತಕ್ಕ ಮೂಲ ಸೌಂದರ‍್ಯಂಶಗಳನ್ನು ಗುರುತಿಸಿ ಕಾಲಕಾಲಕ್ಕೆ ತಕ್ಕ ರಂಗಪರಿವರ್ತನೆ ಮಾಡಿಕೊಂಡೇ ಜಾನಪದ ಇವರೆಗೆ ಬದುಕಿ ಬಂದಿರುವುದು.
ಒಂದಾನೊಂದು ಕಾಲದಲ್ಲಿ ಜನಪದ ರಂಜನೆಯ ಏಕಮೇವ ಮುಖ್ಯ ಕಲೆ ಎನಿಸಿದ್ದಿರಬಹುದಾದ ಮೂಡಲಪಾಯದ ಆಭರಣ, ವೇಷಭೂಷಣ, ನೃತ್ಯಗಳ ವೈಭವವನ್ನು ಮತ್ತೊಮ್ಮೆ ಮರುಕಳಿಸಲು ವಿದ್ಯಾವಂತ ಜನರ ನೇತೃತ್ವ ಹಾಗೂ ಜನಪದ ಕಲಾವಿದರ ಸಹಕಾರ ಎರಡೂ ಅಗತ್ಯ. ಅಂಥ ಒಂದು ಸನ್ನಿವೇಶವನ್ನು ಕೊನೇಹಳ್ಳಿಯ ಮೂಡಲಪಾಯ ಟ್ರಸ್ಟ್‌ನ ಸಂಘಡಕರು ಸೃಷ್ಟಿಮಾಡುತ್ತಿದ್ದಾರೆ. ಇದು ಮೂಡಲಪಾಯದ ಅಭಿವೃದ್ಧಿ ಮತ್ತು ಪರಿಷ್ಕಾರ ಹಾಗೂ ಸಂಶೋಧನೆಗೆ ನಾಂದಿಯಾಗುವುದರಿಂದ ಈ ವಿಷಯದಲ್ಲಿ ಕೊನೇಹಳ್ಳಿಯೊ ಮೊದಲಹಳ್ಳಿಯಾಗುತ್ತದೆ. ಹಳ್ಳಿಯಿಂದ ಡಿಲ್ಲಿಯವರೆಗೂ ಪ್ರಭಾವಬೀರುವಷ್ಟು ಕೆಲಸ ಈ ಕೇಂದ್ರದಿಂದ ನಡೆಯುತ್ತಿದೆ
ಮೂಡಲಪಾಯ ಯಕ್ಷಗಾನದ ಪುನರುಜ್ಜೀವನದ ದೃಷ್ಟಿಯಿಂದ ೧೯೬೯ ರಲ್ಲಿ ಸ್ಥಾಪನೆಗೊಂಡ ಶ್ರೀ ಬಿದರೆಯಮ್ಮ ಯಕ್ಷಗಾನ ಮಂಡಲಿ ಈಗ ಮೂಡಲಪಾಯ ಯಕ್ಷಗಾನ ಟ್ರಸ್ಟ್ ಆಗಿ ಆ ನಿಟ್ಟಿನಲ್ಲಿ ಹಲವು ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ೧೯೮೧ ರಲ್ಲಿ ವಿಜೃಂಭಣೆಯಿಂದ ದಶಮಾನೋತ್ಸವವನ್ನು ಆಚರಿಸಿಕೊಂಡ ಈ ಮಂಡಲಿ, ಈ ಅವಧಿಯಲ್ಲಿ ಸಾಧಿಸಿರುವ ಕಾರ್ಯಗಳು ಹಲವು.
ಮೂಲೆಗುಂಪಾಗಿದ್ದ ಮೂಡಲಪಾಯ ಯಕ್ಷಗಾನವನ್ನು ಪುನರುಜ್ಜೀವನ ಗೊಳಿಸುವ ಹಾಗೂ ಅದಕ್ಕೆ ನವ ಚೈತನ್ಯ ತುಂಬುವ ಏಕಮಾತ್ರ ದೃಷ್ಟಿಯಿಂದಲೇ ಸ್ಥಾಪನೆಗೊಂಡ ಈ ಟ್ರಸ್ಟ್ ಅದನ್ನು ಯಶಸ್ವಿಯಾಗಿ ಸಾಧಿಸುತ್ತಾ ಬಂದಿದೆ. ಮೂಡಲಪಾಯ ಯಕ್ಷಗಾನ ಕ್ಷೇತ್ರದಲ್ಲೆಲ್ಲ ಇದೊಂದು ಚಳುವಳಿಯನ್ನೇ ನಡೆಸಿತೆನ್ನಬಹುದು. ನಶಿಸಿ ಹೋಗುತ್ತಿದ್ದ ಕಲೆಗೆ ಜೀವತುಂಬಿದ್ದಲ್ಲದೆ, ಹೊಸ ಹುರುಪನ್ನೂ ಅದಕ್ಕೆ ತಂದುಕೊಟ್ಟಿತು. ಕಲಾವಿದರ ಸಂಘಟನೆ, ತರಬೇತಿ ವೇಷ ಭೂಷಣಗಳ ಸುಧಾರಣೆ, ಕುಣಿತ ಮತ್ತು ಹಿಮ್ಮೇಳದಲ್ಲಿ ನಯಗಾರಿಕೆ ಹಾಗೂ ಮೂಲಕ್ಕೆ ಧಕ್ಕೆ ಒದಗದಂತೆ ಎಚ್ಚರ, ಇವೆಲ್ಲವನ್ನೂ ಹಲವು ಪ್ರದರ್ಶನಗಳ ಮೂಲಕ ಕಲಾವಿದರಿಗೆ ಮತ್ತು ಭಾಗವತರಿಗೆ ಮನದಟ್ಟಾಗುವಂತೆ ಮಾಡಲಾಗಿದೆ. ಕಲಾವಿದರಿಗೆ ಹಾಗೂ ಭಾಗವತರಿಗೆ ತಕ್ಕ ಗೌರವ ದೊರೆಯುವಂತೆ ಮಾಡುವುದರ ಮೂಲಕ ಅವರುಗಳಿಗೆ ತಮ್ಮ ಕಲೆಯ ಬಗೆಗೆ ಹೆಚ್ಚು ಗೌರವ ಮೂಡುವಂತೆ ಮಾಡುವಲ್ಲಿಯೂ ಇದು ಹಿಂದೆ ಬಿದ್ದಿಲ್ಲ. ಕರ್ನಾಟಕದ ಪ್ರಸಿದ್ಧ ಬಯಲಾಟದ ತಂಡಗಳನ್ನು ಒಂದೆಡೆ ಕಲೆಕೆಹಾಕಿ ಪ್ರದರ್ಶನಗಳನ್ನು ಏರ್ಪಡಿಸುವುದರ ಮೂಲಕ ಆ ಕ್ಷೇತ್ರದಲ್ಲಿ ಸದಭಿರುಚಿಯ ಪೈಪೋಟಿ ಉಂಟಾಗುವಂತೆ ಪ್ರೇರೇಪಿಸಿದುದಲ್ಲದೆ. ಮಲಗಿದ್ದ ಎಷ್ಟೋ ತಂಡಗಳು ಮೈ ಕೊಡವಿ ಏಳುವಂತೆಯೂ ಪ್ರೇರೇಸುವಲ್ಲಿಯೂ ಇದು ಮುಂದಾಗಿದೆ.
ಮೂಡಲಪಾಯ ಯಕ್ಷಗಾನ ಟ್ರಸ್ಟ್‌ನ ಆಶ್ರಯದಲ್ಲಿಯೇ, ಯುವಕರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ವೊಂದು ಕೊನೇಹಳ್ಳಿಯಲ್ಲಿ ಆರಂಭವಾಗಿದೆ. ಮುಂದಿನ ಪೀಳಿಗೆಗೆ ಇದೊಂದು ವರವಾಗಿ ಲಭಿಸಿದೆ.
ಈಗ ಇವೆಲ್ಲಕ್ಕೂ ಕಿರೀಟಪ್ರಾಯವಾಗಿ ವಿಶಾಲವಾದ ಬಯಲು ಪ್ರದೇಶದಲ್ಲಿ ಬಯಲು ರಂಗಮಂದಿರವೊಂದು ಸ್ಥಾಪನೆಗೊಂಡಿದೆ. ದೂರಕ್ಕೆ ಯಕ್ಷಗಾನದ ಕಿರೀಟಾಕೃತಿಯಲ್ಲಿ ಕಾಣುವ ಇದರ ಮುಂಭಾಗ ಯಾರನ್ನಾದರೂ ಬೆರಗು ಗೊಳಿಸುವಂಥದು. ಎಲ್ಲ ಸವಲತ್ತುಗಳನ್ನೂ ಒಳಗೊಂಡ ಇದರ ಒಳಭಾಗ, ಆಧುನಿಕ ರಂಗಮಂದಿರಕ್ಕೆ ಸಮನಾದುದು.
೧೯೬೯ ರಿಂದ ೧೯೮೩ ಅವದಿಯಲ್ಲಿಯ ಇದರ ಹೆಜ್ಜೆ ಗುರುತುಗಳನ್ನು ಗಮನಿಸುತ್ತ ಬಂದಾಗ ಯಾರಿಗಾದರೂ ಹೆಮ್ಮೆ ಎನಿಸುವುದರಲ್ಲಿ ಆಶ್ಚರ್ಯವಿಲ್ಲ.
ಇದೆಲ್ಲದರ ಹಿಂದೆ ದುಡಿದ ಕೈಗಳು ಅದೆಷ್ಟು! ಪ್ರಪ್ರಥಮವಾಗಿ ಡಾ. ಜೀ. ಶಂ. ಪರಮಶಿವಯ್ಯ ಅವರನ್ನು ಇಲ್ಲಿ ನೆನೆಯಬೇಕಾಗುತ್ತದೆ. ಈ ಎಲ್ಲ ಯೋಜನೆಯ ಮೂಲ ಶಿಲ್ಪಿಯೇ ಅವರು. ಅದರ ಸ್ಥಾಪಕರು, ಯೋಜಕರು ಎಲ್ಲವು ಅವರೇ. ತನು ಮನ ಧನವನ್ನು ಅರ್ಪಿಸಿ ಡಾ. ಜೀಶಂಪ ಅವರು ಇದಕ್ಕಾಗಿ ದುಡಿದಿದ್ದಾರೆ ಎಂಬುದು ಉತ್ಪ್ರೇಕ್ಷೆಯ ಮಾತೂ ಅಲ್ಲ, ಸವಕಲು ಮಾತೂ ಅಲ್ಲ. ಹಗಲು ರಾತ್ರಿ ಎನ್ನದೆ ಇದಕ್ಕಾಗಿ ಬೇಸರವಿಲ್ಲದೆ ತಿರುಗಿ ಶ್ರಮವಹಿಸಿ ದುಡಿದಿದ್ದಾರೆ. ಮೂಡಲಪಾಯ ಯಕ್ಷಗಾನ ಟ್ರಸ್ವಿನ ಸಾಧನೆಯನ್ನು ಗಮನಿಸುತ್ತ ಬಂದ ಎಲ್ಲರಿಗೂ ಇದು ತಿಳಿದಿರುವ ವಿಷಯ. ಅವರ ಮಾರ್ಗದರ್ಶನದಲ್ಲಿ ಮೂಡಲಪಾಯ ಯಕ್ಷಗಾನ ಟ್ರಸ್ಟ್, ಹಾಗೂ ಮೂಡಲಪಾಯ ಯಕ್ಷಗಾನ ಕಲಾವಿದರು ಸುರಕ್ಷಿತವಾಗಿ ತಮ್ಮ ಸಾಧನೆಯ ಹಾದಿಯಲ್ಲಿದ್ದಾರೆ. ಇದೆಲ್ಲದರ ಕೀರ್ತಿ ಗೌರವ ಡಾ. ಜೀಶಂಪ ಅವರಿಗೆ ಸಲ್ಲುತ್ತದೆ. ಈ ಎಲ್ಲ ಕಾರ್ಯ ಚಟುವಟಿಕೆಗಳೂ ನಡೆಯುತ್ತಿರುವುದು ತಿಪಟೂರು ತಾಲ್ಲೂಕು ಕೊನೇಹಳ್ಳಿಯಲ್ಲಿ. ಯಾವುದೇ ಮಹತ್ವದ ಸಾಧನೆಯನ್ನು ಮಾಡಲು ಮೊದಲು ಒಂದುನೆಲೆ ಬೇಕು.ಅದಿಲ್ಲದೆ ಏನನ್ನು ಸಾಧಿಸಲು ಸಾಧ್ಯವಾಗದು. ಅಂತಹ ನೆಲೆಯನ್ನು ಒದಗಿಸಿಕೊಟ್ಟವರು ಅಲ್ಲಿಯ ಧನಿಕರೂ, ಉದಾರಿಗಳೂ, ಕಲಾವಿದರೂ, ಕಲಾಭಿಮಾನಿಗಳೂ ಆದ ಶ್ರೀ ಬಿ. ನಂಜುಂಡಪ್ಪನವರು, ಅವರ ಸಹೋದರರಾದ ಶ್ರೀ ಎ. ಬಿ. ಬಸಪ್ಪನವರು ಮತ್ತು ಮನೆಮಂದಿ.
ಇವರುಗಳು ಈ ಟ್ರಸ್ವಿಗಾಗಿ, ಕಲೆಯ ಉದ್ಧಾರಕ್ಕಾಗಿ ತೋರುವ ಶ್ರದ್ಧೆ, ಆಸಕ್ತಿ ಮಾತಿಗೆ ನಿಲುಕದ್ದು. ತಮ್ಮ ಮನೆಯ, ವ್ಯವಸಾಯದ ಕೆಲಸವನ್ನೂ ಎಷ್ಟೋಬಾರಿ ಬದಿಗೊತ್ತಿ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ಮನೆತನ ಕಲೆ ಮತ್ತು ಶಿಕ್ಷಣಕ್ಕಾಗಿ ತೋರುತ್ತ ಬಂದಿರುವ ಆಸಕ್ತಿ, ಕೊಡುತ್ತ ಬಂದಿರುವ ಪ್ರೋತ್ಸಾಹ ಯಾರಾದರೂ ಮೆಚ್ಚಿಕೊಳ್ಳು ವಂತಹುದು.
ಶ್ರೀ ಎಂ. ಆರ್ಯಮಿತ್ರ ಅವರು ನಮ್ಮ ಜನಾನುರಾಗಿ ಉನ್ನತ ಅಧಿಕಾರಿಗಳಲ್ಲಿ ಒಬ್ಬರು. ಕಲಾಭಿಮಾನಿಗಳೂ, ಸಂಸ್ಕ್ರತಿ ಸಂಪನ್ನರೂ ಆದ ಅವರು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಬಂದದ್ದೂ ಮೂಡಲಪಾಯ ಯಕ್ಷಗಾನ ಕೇಂದ್ರಕ್ಕೆ ಜೀವಬಂದಂತಾಯಿತು. ಮೂಡಲಪಾಯ ಯಕ್ಷಗಾನ ರಂಗಮಂದಿರದ ನಿರ್ಮಾಣದಲ್ಲಿ ಅವರ ಪಾತ್ರ ಅತ್ಯಂತ ಗಣ್ಯವಾದುದು.
ಹನಿಗೂಡಿದರೆ ಹಳ್ಳ ಎಂಬಂತೆ, ಈ ಟ್ರಸ್ವಿನ ಅಭಿವೃದ್ಧಿ ಸರ್ವತೋಮುಖವಾಗಿ ಆಗಲು ಹಲವು ಆಸಕ್ತರು, ಕಲಾವಿದರು, ಕಲಾಭಿಮಾನಿಗಳು, ಸ್ವಯಿಚ್ಛೆಯಿಂದ ದುಡಿದಿದ್ದಾರೆ ಭಾಗವತ ಪಟೇಲ್ ನಾರಸಪ್ಪನವರು, ಮೊದಲಿ ನಿಂದಲೂ ಮೂಡಲಪಾಯ ಯಕ್ಷಗಾನ ಟ್ರಸ್ವಿನ ಸಂಬಂಧವನ್ನು ಇಟ್ಟುಕೊಂಡು ಬಂದವರು. ಅಷ್ಟೇ ಅಲ್ಲ, ಟ್ರಸ್ವಿನ ಎಲ್ಲ ಯೋಜನೆಗಳಲ್ಲಿಯೂ ಪಾಲ್ಗೊಂಡು, ಕಲಾವಿದರನ್ನು ತರಬೇತಿಕೊಟ್ಟು ಬೆಳೆಸುವುದರ ಜೊತೆಯಲ್ಲಿ ಅವರ ಬೆಳವಣಿಗೆಯನ್ನು ಕಂಡುಕೊಂಡವರು. ಅತ್ಯಂತ ಪ್ರತಿಭಾಶಾಲಿಯಾದ ಈ ಅಪೂರ್ವ ಕಲಾವಿದ ತಾಳವನ್ನು ಹಿಡಿದುನಿಂತರೆ ರಂಗದ ಮೇಲೆ ನವ ಚೈತನ್ಯವನ್ನು ತುಂಬುತ್ತಾರೆ. ಕರ್ನಾಟಕದ ಬಹುಭಾಗವನ್ನು ತಮ್ಮ ತಂಡದೊಂದಿಗೆ ಸುತ್ತಿರುವ ಶ್ರೀ ನಾರಸಪ್ಪನವರು ಮೂಡಲಪಾಯ ಯಕ್ಷಗಾನದ ಒಂದು ಅಪೂರ್ವ ಆಸ್ತಿ.
ಶ್ರೀ ಎ. ಬಿ. ಬಸಪ್ಪನವರು ಈ ಕೇಂದ್ರದ ಮತ್ತೊಬ್ಬ ಶ್ರದ್ಧಾವಂತ ಕೆಲಸಗಾರರು, ಗಣ್ಯ ಜಮಿನ್ಧಾರರಾದ ಅವರ ಸೇವೆ ವಿಶಿಷ್ಟವಾದುದು.
ಶ್ರೀ ಎ. ಎನ್. ರಾಜು ಮತ್ತು ಶ್ರೀ ಕೆ. ಟಿ. ರಂಗಪ್ಪ ಇವರುಗಳು ಟ್ರಸ್ಟಿನ ಕಾರ್ಯದರ್ಶಿಗಳಾಗಿ, ಟ್ರಸ್ಟಿನ ಅಭಿವೃದ್ಧಿ ಕಾರ್ಯದಲ್ಲಿ ಶ್ರಮವಹಿಸಿ ದುಡುಯುತ್ತ ಬಂದಿದ್ದಾರೆ. ಶ್ರೀಗಳಾದ ಎನ್. ಸತ್ಯನಾರಾಯಣ್, ಕೆ, ಶಿವಪ್ಪ, ವಿಷ್ಣುಕುಮಾರ್, ಜಯಣ್ಣ, ಶಂಕರಪ್ಪ, ಮಂಜಣ್ಣ, ಸಿದ್ದಾಪುರದ ರಾಜಣ್ಣ, ಶಿವಬಸಪ್ಪ, ಮಂಜುನಾಥ್, ನಾರಾಯಣಪ್ಪ ಮುಂತಾದವರು ಹಗಲಿರುಳೆನ್ನದೆ ದುಡಿದಿದ್ದಾರೆ. ಈ ಪಟ್ಟಿ ಬೆಳೆಸುತ್ತಾಹೋದರೆ ಬೆಳೆಯುತ್ತಾಹೋಗುತ್ತದೆ. ಒಂದು ದೊಡ್ಡ ತಂಡವೇ ಈ ಎಲ್ಲ ಕಾರ್ಯದಲ್ಲಿಯೂ ಭಾಗಿಯಾಗಿದೆ ಎಂದರೆ ಹೆಚ್ಚು ಸಮಂಜಸ.

Friday, October 1, 2010

ನೆನೆ ನೆನೆ ಗಾಂಧಿಯನು














ಖಾಲೀ ಗದ್ದಲದ ಈ ನಾಡಿನ ಉದ್ದಗಲಕ್ಕೂ
ಈಗ ಶಾಂತಿ ನೆಲೆಸಿದೆ.
ನರನಾಡಿಯೆಲ್ಲ ನಿಂತೇ ಹೋದಂತಾಗಿ
ನಾವೆಲ್ಲ ಯೋಗಿಗಳಾಗಿದ್ದೇವೆ:
ಹಾದಿ ಮಾತು, ಬೀದಿ ಭಾಷಣಗಳ ಸದ್ದಡಗಿ
ಕಿವಿ ತುಂಬ ಹುಲುಸಾಗಿ ಕೂದಲು ಬೆಳೆಯುತ್ತಿದೆ.
-
ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳ ಬದಲು
ಪತ್ರಿಕೆಗಳ ತುಂಬ ಶುದ್ಧ ಸಮಾಚಾರ ತುಂಬಿದೆ.
ಎಲ್ಲಾ ಸಾಮಾನುಗಳ ಬೆಲೆ ಇಳಿದೂ ಇಳಿದೂ
ಈಗ ಕೈಗೆ ಸಿಗದಂತಾಗಿವೆ.
ಬಿಡಾಡಿ ನಾಯಿಗಳ ನಿರ್ಬೀಜೀಕರಣವಾಗಿದೆ.
ಭಾರತದ ಜನಸಂಖ್ಯೆ ಇಳಿಯುತ್ತಿದೆ.
-
ನಾಳಿನ ನಾಗರಿಕರಾದ ಇಂದಿನ ಮಕ್ಕಳೆಲ್ಲ
ಸರಿಯಾಗಿ ಸಾಲೆಗೆ ಹೋಗಿ
ಒಂದು ಎರಡು ಬಾಳೆಲೆ ಹರಡು
ಕಲಿಯುತ್ತಿದ್ದಾರೆ.
ಹಸಗಂಡು ಮನೆಗೆ ಬಂದು
ಮಣ್ಣಿನ ವಾಸನೆಯ ತಾಜಾ ಊಟ ಮಾಡುತ್ತಾರೆ.
-
ಜಾಣ ಬಾಬಾಗಳಿಗೆ ಹುಚ್ಚಗೌಡರ ಬೆನ್ನುಸಿಕ್ಕು
ಧೂರ್ಮೋದ್ಧಾರದ ಸವಾರಿ ಮುನ್ನಡೆದಿದೆ.
ಅಸ್ಪೃಶ್ಯ ದೇವರಿಗೆ ಹರಿಜನರ ದರ್ಶನವಾಗಿ
ಅವರ ಉದ್ಧಾರವೂ ಆಗುತ್ತಿದೆ.
-
ಸರಕಾರದ ಕೆಲಸ ದೇವರ ಕೆಲಸವಾಗಿ
ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ.
ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ
ಜಿಟಿ ಜಿಟಿ ಮಳೆ ಹಿಡಿದಿದೆ.
ನಮ್ಮ ತ್ರಿವರ್ಣ ಧ್ವಜ ತೊಯ್ದು ತುಪ್ಪಡಿಯಾಗಿ
ಅಶೋಕ ಚಕ್ರ ಸ್ಥಿರವಾಗಿದೆ.
-
ಹೆದ್ದಾರಿಯ ಮೇಲೆ ಕೆಟ್ಟುನಿಂತ ಟ್ರಕ್ಕು ಕೂಡ
ನಾಡ ಮುನ್ನಡೆದಿದೆ- ಎಂಬ ಸಂದೇಶ ಹೊತ್ತಿದೆ.
ರೇಡಿಯೋದ ಗಿಳಿವಿಂಡು, ಅದೋ,
ಒಕ್ಕೊರಲಿಂದ ಅದೇ ಹಾಡು ಹಾಡುತ್ತಿದೆ.
ಧನ್ಯತೆಯ ಈ ಕ್ಷಣದಿ, ಓ ಮುದ್ದುರಂಗ,
ಕಿವಿ ಮುಚ್ಚಿ, ಕಣ್ಣು ಮುಚ್ಚಿ,
ನೆನೆ ನೆನೆ ಗಾಂಧಿಯನು.
(ಯಾವ ಗಾಂಧಿ? ಅಂತ ತಿಳಿಯದೇ ಪೆದ್ದಲಿಂಗ?)
ಬಾಯಿ ಮುಚ್ಚಿ,
ನೆನೆ ನೆನೆ ಗಾಂಧಿಯನು.
- ಚಂದ್ರಶೇಖರ ಪಾಟೀಲ

Blog Archive